ಕೋಬೀಯ 

ಪಾಲಮೋನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಬಳ್ಳಿ. ಬಲು ಸುಂದರವಾದ ಹೂಬಿಡುವುದರಿಂದ ಇದನ್ನು ಅಲಂಕಾರ ಸಸ್ಯವಾಗಿ ಕುಂಡಗಳಲ್ಲಿ, ಮಡಿಗಳಲ್ಲಿ ಬಳಸುತ್ತಾರೆ. ಇದು ಅಮೆರಿಕದ ಉಷ್ಣಪ್ರದೇಶಗಳ ಮೂಲವಾಸಿ. 17ನೆಯ ಶತಮಾನದಲ್ಲಿ ಜೀವಿಸಿದ್ದ ಸ್ಪೇನ್ ದೇಶದ ಸಸ್ಯಶಾಸ್ತ್ರಜÐ ಹಾಗೂ ಪಾದ್ರಿಯಾಗಿದ್ದ ಫಾ.ಕೋಬೊ ಎಂಬವನ ಗೌರವಾರ್ಥವಾಗಿ ಈ ಗಿಡಕ್ಕೆ ಈ ಹೆಸರು ಕೊಡಲಾಯಿತು. ಕೋಬೀಯ ಜಾತಿಯಲ್ಲಿ ಸ್ಕಾಂಡೆನ್ಸ್, ಸ್ಟಿಪ್ಯುಲಾರಿಸ್ ಮತ್ತು ಮ್ಯಾಕ್ರೊಸ್ಟೋಮ ಎಂಬ ಮೂರು ಪ್ರಭೇದಗಳಿವೆ. ಸ್ಕಾಂಡೆನ್ಸ್ ಪ್ರಭೇದವೇ ಬಲು ಮುಖ್ಯವಾದುದು. ಇದು ಸು.15'-20' ಎತ್ತರಕ್ಕೆ ಬೆಳೆಯುವ ದುರ್ಬಲಕಾಂಡದ ಬಳ್ಳಿ. ಸಂಯುಕ್ತಮಾದರಿಯ ಎಲೆಗಳ ತುದಿಯಲ್ಲಿರುವ ಕುಡಿಬಳ್ಳಿಗಳ (ಟೆಂಡ್ರಿಲ್ಸ್) ಸಹಾಯದಿಂದ ಆಸರೆಗಳನ್ನು ತಬ್ಬಿ ಬೆಳೆಯುತ್ತದೆ. ಕೋಬೀಯ ಹೂ ಬಿಡುವ ಕಾಲ ಮೇ-ನವೆಂಬರ್ ತಿಂಗಳುಗಳು. ಹೂಗಳು ಒಂಟೊಂಟಿಯಾಗಿ ಅರಳುತ್ತವೆ. ಇವು ಪ್ರಾರಂಭದಲ್ಲಿ ನಸುಹಸಿರು ಬಣ್ಣಕ್ಕಿದ್ದು ಕ್ರಮೇಣ ಊದಾಬಣ್ಣಕ್ಕೆ ತಿರುಗುತ್ತದೆ. ಒಂದೊಂದು ಹೂವಿನಲ್ಲೂ ಉದ್ದನೆಯ ತೊಟ್ಟೂ 5 ಪುಷ್ಪಪತ್ರಗಳೂ 5 ದಳಗಳೂ 5 ಕೇಸರಗಳೂ ಮೂರು ಕಾರ್ಪೆಲ್‍ಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ದಳಗಳು ಒಂದರೊಡನೊಂದು ಕೂಡಿಕೊಂಡಿದ್ದು ಗಂಟೆಯಾಕಾರದಲ್ಲಿವೆ. ಕೇಸರಗಳ ಬುಡದಳಗಳ ಗಂಟಲಿಗೆ ಅಂಟಿಕೊಂಡಿದೆ. ಫಲ ಬಹುಬೀಜವುಳ್ಳ ಸಂಪುಟ ಮಾದರಿಯದು. ಬೀಜಗಳು ಚಪ್ಪಟೆಯಾಗಿವೆ.

ಕೋಬೀಯ ಸಸ್ಯವನ್ನು ಬೀಜಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಮೈದಾನ ಪ್ರದೇಶಗಳಲ್ಲಿ ಇದನ್ನು ಚೆನ್ನಾಗಿ ಬೆಳೆಸಬಹುದು. ಇದರ ಬೇಸಾಯಕ್ಕೆ ಚೌಗಿಲ್ಲದ ಮತ್ತು ಫಲವತ್ತಾದ ಮಣ್ಣು ಅಗತ್ಯ. ಬೀಜ ಬಿತ್ತುವುದಕ್ಕೆ ಮೊದಲು ಮಣ್ಣಿಗೆ ಸುಣ್ಣ ಮತ್ತು ಇಟ್ಟಿಗೆ ಪುಡಿ ಹಾಕುವುದರಿಂದ ಈ ಸಸ್ಯ ಹೊಳಪಾದ ಮತ್ತು ಆಕರ್ಷಕವಾದ ಹೂಗಳನ್ನು ಬಿಡುತ್ತದೆ.    (ಎನ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ